ಪೊಗರು
ಪೊಗರು ಚಿತ್ರದ ವಿವಾದದ ಸುತ್ತಾ, ಭೌದ್ಧಿಕ ಗುಲಾಮಗಿರಿ ಕಳಚುವ ಸುಸಂದರ್ಭ..!!
ಚಿತ್ರದಲ್ಲಿ ವಿವಾದವಾಗಿರುವ ಒಂದೊಂದೇ ವಿಷಯಗಳನ್ನು ನೋಡೋಣಾ:-
ಯಜ್ಞಮಾಡುತ್ತಿರುವ ಪುರೋಹಿತನ ಹೆಗಲ ಮೇಲೆ ಕಾಲಿಟ್ಟ ಎಂಬುದು..!!
ಕಾರಣ:- ಯಜ್ಞ-ಯಾಗ ಎಂಬುದು ಲೋಕಕಲ್ಯಾಣಾರ್ಥ, ಅದನ್ನು ಮಾಡುವವರು ಲೋಕಹಿತ ಬಯಸುವವರು ಎಂಬುದು.
ರಿಯಾಲಿಟಿ:- ಲೋಕಕಲ್ಯಾಣಾರ್ಥ ಮಾಡುವ ಬಹುಮುಖ್ಯ ಯಾಗಗಳು ಎರಡೇ, "ರಾಜಸೂಯ", " ಅಶ್ವಮೇಧ". ಉಳಿದವು ತಮ್ಮತಮ್ಮ ಅಭಿಷ್ಟೇಗೆ ಮಾಡಿಸುವಂಥಹುವು. ಇನ್ನು ಯಜ್ಞ-ಯಾಗಗಳು ವ್ಯಾವಹಾರಿಕವಾಗಿ ಬಹಳ ಕಾಲವಾಗಿದೆಯಲ್ಲಾ? ಉದಾಹರಣೆಗೆ ಪ್ರಳಯಕಾಲ ಎಂಬ ಭ್ರಮೆ 2012 ರಲ್ಲಿ ಉಂಟಾಗಿದ್ದ ಸಂದರ್ಭದಲ್ಲಿ ಬಹಳಷ್ಟು ಜನರು "ಪ್ರಳಯಕಾಲದ ರುದ್ರಯಾಗ" ಮಾಡಿ ಜಗತ್ತನ್ನು ಕಾಪಾಡುತ್ತೇವೆ ಎಂಬ "ಬೃಹತ್ ಬ್ರಹ್ಮಾಂಡ" ನಾಟಕಗಳನ್ನು ಟಿವಿಯಲ್ಲಿ ಬಹಳಕಾಲ ನೋಡಿದೆವಲ್ಲಾ..!! ಕಾಲಿಟ್ಟದ್ದು ತಪ್ಪಾಗಿದೆ ಎಂದು, ಅಸಲಿ ಕಾರಣ ಆ ಕಲಾವಿದರೂ ಸಹ ನಿಜ ಬ್ರಾಹ್ಮಣರೇ ಅಗಿದ್ದಾರೆ. ಪ್ರಣಯಮೂರ್ತಿ, ಶಂಕರ್ ಅಶ್ವತ್ಥ್ ಅವರು. ಅದೂ ಸಮಸ್ಯೆ, ಇಂದು ಬ್ರಾಹ್ಮಣ ಪಾತ್ರಧಾರಿಗಳ ಮೇಲೆ ಕಾಲಿಟ್ಟವರು ಮುಂದೆ ಬ್ರಾಹ್ಮಣರಿಗೆ ಗೌರವ ಕೊಡುವರೇ ಎಂಬುದು, ಏಕೆಂದರೆ ಶತಶತಮಾನಗಳಿಂದ "ಬ್ರಾಹ್ಮಣರಿಗೆ ಅಗೌರವ ತೋರಿಸುವುದು ಗೋಹತ್ಯೆಗೆ ಸಮ, ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಬ್ರಾಹ್ಮಣರಿಗೆ ಕಾಲುತಾಗಿಸುವುದು ಬ್ರಹ್ಮ ಹತ್ಯೆಗೆ ಸಮ" ಎಂದು ನಂಬಿಸಲಾಗಿದೆ. ಇಲ್ಲಿನ ಎಲ್ಲರೂ ಹಾಗೆಯೇ ನಡೆದುಕೊಂಡರು, ಆದರೆ ವಿದೇಶಿ ದಾಳಿಕೋರರು ಮಾತ್ರ ತುಂಡುತುಂಡಾಗಿ ಕತ್ತರಿಸಿ ಬಿಸಾಡಿದರು. ಮೊಹಮ್ಮದ್ ಘೋರಿ ದಾಳಿಯಿಟ್ಟ ಸಂದರ್ಭದಲ್ಲಿ ಹಾಗೆ ಕತ್ತರಿಸಿ ಬಿಸಾಡಿದ ಬ್ರಾಹ್ಮಣರ ಜನಿವಾರಗಳನ್ನು ಮಣಲೆಕ್ಕದಲ್ಲಿ ತೂಕ ಮಾಡಿಸಿದ ಎಂಬ ಇತಿಹಾಸವಿದೆ. ಇಲ್ಲಿನವರಂತೆ ಎಲ್ಲರೂ ಇದ್ದರೇ ಹೇಳಿ..!!
ವಿವಾದ:- ಬ್ರಾಹ್ಮಣರನ್ನು ಮಾಂಸ ತಿಂತಿರಾ ಎಂದು ನಾಯಕ ನಟ ಕೇಳುತ್ತಾನೆ ಎಂಬುದು ಮತ್ತು ಕೊನೆಯಲ್ಲಿ ನಾಯಕಿ ನೀನು ಮಾಂಸ ತಿಂದು ನನಗೆ ಅನ್ನ ಕೊಡು ಎಂಬುದು ವಿವಾದ.
ಕಾರಣ:- ಬ್ರಾಹ್ಮಣರೆಲ್ಲಾ ಸಸ್ಯಾಹಾರಿಗಳು, ಅದೂ ಶುದ್ಧ. ಹಾಗಾಗಿ ಅದು ವಿವಾದಾತ್ಮಕ ಅನ್ನೋ ವಿಷಯ..!
ರಿಯಾಲಿಟಿ:- ಗೋವಾದಲ್ಲಿನ ದೈವಜ್ಞ ಬ್ರಾಹ್ಮಣರು ಕೋಳಿ-ಮೀನು ತಿನ್ನುತ್ತಾರೆ, ಬಂಗಾಳದ ಬ್ರಾಹ್ಮಣರು ಮೀನು ತಿನ್ನುತ್ತಾರೆ, ಪಂಡಿತರು ಎಂದೇ ಖ್ಯಾತರಾದ ಕಾಶ್ಮೀರಿ ಪಂಡಿತರು ಕುರಿ ಮಾಂಸ ತಿನ್ನುತ್ತಾರೆ. ಎಲ್ಲಾ ಬ್ರಾಹ್ಮಣರು ಮಾಂಸ ತಿನ್ನೋದಿಲ್ಲಾ ಅನ್ನೋದು ಶುದ್ಧ-ಅಪ್ಪಟ-ಸಂಸ್ಕಾರಯುತ ಸುಳ್ಳು. ಆದರೆ ಇಲ್ಲಿ ಹಾಗೆ ನಂಬಿಸಲಾಗಿದೆ. ಬ್ರಾಹ್ಮಣರ ಕೆಲವು ಪಂಗಡಗಳು ಮಾತ್ರ ಮಾಂಸ ತಿನ್ನೋದಿಲ್ಲಾ, ಹೇಗೆ ಹಿಂದೂಗಳಲ್ಲಿ ಕೆಲವೊಂದು ಜನಾಂಗಗಳು ತಿನ್ನುವುದಿಲ್ಲವೋ ಹಾಗೆಯೇ, ಇಂದು ಟೂತ್ ಪೇಸ್ಟಿನಿಂದ ಹಿಡಿದು, ಮಾತ್ರೆ-ಔಷಧದವರಗೆ ಪ್ರಾಣಿಜನ್ಯ ವಸ್ತುಗಳು ಪ್ರತಿಯೊಂದರಲ್ಲೂ ಇರುವುದರಿಂದ ಶುದ್ಧಸಸ್ಯಾಹಾರ ಎಂಬುದು ಅಕಾಲಿಕ ಮತ್ತು ಅವಾಸ್ತವಿಕ..!! ಜೊತೆಗೆ ವಿದೇಶಕ್ಕೆ ಹೋಗಿ ಮತಾಂತರವಾಗಿ, ಅಲ್ಲಿನ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿರುವ "ಕಮಲಾ ಹ್ಯಾರಿಸ್" ಹಂದಿಮಾಂಸ ತಿನ್ನುವ ಬಗೆಗೆ ಸಾರ್ವಜನಿಕವಾಗಿ ಘೋಷಿಸಿಕೊಂಡರೂ ಆಕೆ ಬ್ರಾಹ್ಮಣರ ಮನೆ ಹೆಣ್ಣುಮಗಳು, ಸಿನಿಮಾದಲ್ಲಿ ಹಾಗೆ ಕೇಳಿದರೆ ಮಾತ್ರ ತಪ್ಪು, ವಿವಾದ..!! ಎಷ್ಟರ ಮಟ್ಟಿಗೆ ಬೌದ್ಧಿಕ ಗುಲಾಮಗಿರಿಗೆ ಒಳಪಟ್ಟಿದ್ದಾರೆ ನಂಬುವ ಜನ..!!
ವಿವಾದ:- ಬ್ರಾಹ್ಮಣರನ್ನ ಪೂಜೆ-ಪುರಸ್ಕಾರಗಳ ಹೆಸರಿನಲ್ಲಿ ದುಡ್ಡು ಮಾಡಿಕೊಳ್ತೀರಿ ಎಂದು ನಾಯಕ ತರಾಟೆಗೆ ತೆಗೆದುಕೊಳ್ಳೋದು, ಮತ್ತೆ ಒಬ್ಬನ ಗಡ್ಡ ಕತ್ತರಿಸೋದು.
ಕಾರಣ:- ಅವರು ಮಾಡುವ ಪ್ರತಿಪೂಜೆಯೂ ಮತ್ತೊಬ್ಬರ ಒಳಿತಿಗಾಗಿ, ದುಡ್ಡು ಎಂಬುದು ಬರಿ ಸೇವೆ ಎಂಬುದು..!!
ರಿಯಾಲಿಟಿ:- ಹೌದೇ? ದೊಡ್ಡ ದೊಡ್ಡ ದೇವಾಲಯಗಳ ಪೂಜಾರಿಗಳು ಕೆಜಿಗಟ್ಟಲೆ ಚಿನ್ನ ಹಾಕಿಕೊಂಡು ಓಡಾಡೋದು, ಸಣ್ಣಪುಟ್ಟ ದೇವಾಲಯಗಳವರು ಸಹ ಕಾರುಗಳನ್ನು ಹೊಂದಿರೋದು, ಅದೂ ದೇವಾಲಯಗಳ ಸಂಪಾದನೆಯಲ್ಲೇ? ಈ ಪ್ರಶ್ನೆ ಹುಟ್ಟುವಂತೆ ಮಾಡುವುದಿಲ್ಲವೇ? ಕೆಲವೊಂದು ಪೂಜೆಗೆ, ಕೆಲಗಂಟೆಗಳ ಕಾಲಕ್ಕೆ ಲಕ್ಷಕ್ಕೆ ಹತ್ತಿರವಾಗಿ ಸಂಭಾವನೆ ತೆಗೆದುಕೊಳ್ಳಲಾಗುತ್ತದೆ, ಇದು ಸೇವೆಯೋ? ಇಲ್ಲಾ ಫೀಸೋ? ಏನದು? ಅಸಲಿಗೆ ಸನಾತನ ಧರ್ಮ ಕರ್ಮಮಾರ್ಗದ್ದು, "ಕರ್ಮಸು ಕೌಶಲ ಯೋಗಃ" ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, ಅಂತಹ ಕೌಶಲಯುಕ್ತವಾದ ಕರ್ಮದಿಂದಲೇ ಭಾರತದ ಭೂಮಿಯಲ್ಲಿ ಋಷಿ-ಮುನಿಗಳು, ಸಾಧಕರು ಇಂದಿಗೂ ತರ್ಕಕ್ಕೆ ನಿಲುಕದ ಸಾಧನೆಗಳನ್ನು ಮಾಡಿದ್ದಾರೆಯೇ ಹೊರತು ಬರಿ ಆಚರಣೆಯುಕ್ತ (Ritualistic) ಆದ ಮತದಿಂದಲ್ಲಾ..!! ಅದು ಅರ್ಥವಾದರೇ ಭಾರತದ ಭವಿಷ್ಯವೇ ಬದಲಾಗುತ್ತದೆ, ಮಂತ್ರಕ್ಕೆ ಮಾವಿನಕಾಯಿ ಉದುರೋದಿಲ್ಲಾ, ಪ್ರಕೃತಿಧರ್ಮದಿಂದ, ಪುರುಷ ಪ್ರಯತ್ನದಿಂದ..!!
ವಿವಾದ:- ನೇರವಾಗಿ ಬ್ರಾಹ್ಮಣರ ಮನೆಗೆ ನುಗ್ಗುತ್ತಾನೆ ಮಡಿ-ಮೈಲಿಗೆ ತಿಳಿಯದವ ಎಂಬುದು..!!
ಕಾರಣ:- ಬ್ರಾಹ್ಮಣರು ಸದಾ ಮಡಿ-ಮೈಲಿಗೆ, ದೇವರ ಪೂಜೆ, ಆಚಾರಗಳಲ್ಲೇ ಮಗ್ನರಾಗಿರುತ್ತಾರೆ, ಅದಲ್ಲದೇ ಅವರ ಮನೆ ಒಳಗೆ ಪ್ರವೇಶ ಮಾಡುವುದು ಪಾಪಕರ್ಮ ಎಂಬುದು ನಂಬಿಕೆ, ಶತಶತಮಾನಗಳದ್ದು..!!
ರಿಯಾಲಿಟಿ:- ಇಂದಿಗೂ ಹಳೆಯ ತಲೆಮಾರಿನ ಹಲವರು, ಹೊಸ ತಲೆಮಾರಿನ ಕೆಲವರು ಬಿಟ್ಟರೆ ಬಹಳಷ್ಟು ಜನಕ್ಕೆ ಹತ್ತಿಪ್ಪತ್ತು ಮಂತ್ರವೂ ಬಾರದು, ಧರ್ಮಶಾಸ್ತ್ರಗಳನ್ನು ಓದಿಕೊಂಡದ್ದು ಕೂಡ ಕಡಿಮೆಯೇ..!! ಅವರು ಇಂದು ಬಾಯಿಪಾಠ ಮಾಡಿರೋದು, "ನಮಗೆ ಮೀಸಲಾತಿಯಿಲ್ಲಾ", " ನಮ್ಮ ಮೇಲೆ ದೌರ್ಜನ್ಯ ಆಗ್ತಾಯಿದೆ", "ನಾವು ಅಶಕ್ತ, ದುರ್ಬಲ ವರ್ಗದವರು" ಎಂಬ ಕೆಲವೇ ಕೆಲವು ಸಾಲುಗಳನ್ನಷ್ಟೇ..!! ಆಚಾರವೆಲ್ಲಿದೆ? ಪುರಂದರದಾಸರ ಕಾಲದಲ್ಲೇ ಅವರೇ ಚೆನ್ನಾಗಿ ಜಾಡಿಸಿದ್ದಾರೆ, "ಉದರವೈರಾಗ್ಯವಿದು ಪದುಮನಾಭನಲಿ ಲೇಶಭಕುತಿಯಿಲ್ಲಾ" ಎಂದು, ಇವಾಗ ಕೇಳಬೇಕೇ? ಇವಾಗ ತ್ರಿಕಾಲ ಸಂಧ್ಯಾವಂದನೆ ಮಾಡುವುದೇ ಬಹಳ ಕಷ್ಟವಾಗಿದೆ, ಮಡಿ-ಮೈಲಿಗೆ ಎಲ್ಲಾ ಹೋಗಿ ಬಹಳಕಾಲವಾಗಿದೆ, ಇಂತಹ ಚಿತ್ರಗಳನ್ನು ನೋಡಿ ಕೆಳವರ್ಗದವರು ಮನೆಯೊಳಗೆ ಹೋಗಬಹುದು ಎಂಬ ಧೈರ್ಯ ಬಂದುಬಿಟ್ಟರೇ? ಪ್ರತ್ಯೇಕ ಪಂಕ್ತಿಗೆ ಸಂಚಕಾರ ಬಂದಿರುವ ಸಮಯದಲ್ಲಿ ಮನೆಯೊಳಗೆ ಬರುವ ಪ್ರಯತ್ನ ಮಾಡಿದರೇ? ಎಂಬ ಭಯ. ಕೆಲವರ್ಗದ ಹಿಂದೂ ಬರುವಂತಿಲ್ಲಾ, ಆದರೆ ಇಫ್ತಾರ್ ಕೂಟದ ಹೆಸರಿನಲ್ಲಿ ಅನ್ಯಮತೀಯರು ಮಠದೊಳಗೆ ತಿನ್ನಬಹುದು, ಅದು ಸೌಹಾರ್ದತೆ, ಅರ್ಚಕರ ಮಕ್ಕಳೇ ವಿದೇಶದಲ್ಲಿ ಅನ್ಯಮತೀಯರನ್ನು ಮದುವೆಯಾಗಬಹುದು, ಅದು ಜಾತಿಗೆ ಅಪಚಾರವೂ ಅಲ್ಲಾ, ಮೈಲಿಗೆಯೂ ಅಲ್ಲಾ. ಅನ್ಯಮತಕ್ಕೆ ಮತಾಂತರವಾಗುತ್ತಿರುವವರಲ್ಲಿ ಅವರದೇ ಮೇಲುಗೈ, ಮೇಲ್ಜಾತಿಯವರಾಗಿ ಅಷ್ಟೂ ಹೆಸರಿರದಿದ್ದರೇ ಹೇಗೆ?
ವಿವಾದ:- ಹರಿಕಥೆ ನಡೆಯುವಾಗ ಪ್ಯಾಥೋ ಸಾಂಗ್ ಹಾಡ್ತೀಯಾ ಎಂದು ನಾಯಕ ನಟ ಕೇಳುವುದು..!!
ಕಾರಣ:- ಹರಿಕಥೆ ಎಂಬುದು ಭಕ್ತಿಪ್ರಧಾನವಾದುದು, ಅಲ್ಲಿ ದೇವರ ಭಜನೆ, ಕೀರ್ತನೆ ಮಾತ್ರ ಇರುತ್ತದೆ ಎಂಬ ನಂಬಿಕೆ..!!
ರಿಯಾಲಿಟಿ:- ಅಂತಹ ಭಕ್ತಿಪೂರ್ವಕ ಹರಿಕಥೆಗಳು ಮಾಯವಾಗಿ ಬಹಳಕಾಲವಾಗಿದೆ, ಗುರುರಾಜುಲು ನಾಯ್ಡು ಅವರು ಕಾಲಕ್ಕೆ, ಓ ಸಾರಿ ಅವರು ನಾಯ್ಡು ಅಲ್ವಾ..!? ಶತಾವಧಾನದಲ್ಲೇ ಅಪ್ರಸ್ತುತ ಪ್ರಸಂಗಿಗಳು ಏನೇನೋ ಕೇಳುತ್ತಾರಲ್ಲಾ? ಹೋಗಲಿ ಬಿಡಿ, ದೇವತೆಗಳ ಸೌಂದರ್ಯ ವರ್ಣನೆ, ಅವರ ಶೃಂಗಾರಗಳ ವರ್ಣನೆಗಿಂತ "ಪ್ರೀತಿಯ ಪಾರಿವಾಳ ಹಾರಿಹೋತೋ ಗೆಳೆಯ" ಎಂಬಪ್ಯಾಥೋ ಸಾಂಗು ನಿಕೃಷ್ಟವಾಗಿದೆಯೇ?
ಬ್ರಾಹ್ಮಣರಿಗೆ ಅಪಮಾನ ಆಗಿದೆ ಎಂದು ಬೊಬ್ಬಿಟ್ಟು ಬಟ್ಟೆ ಹರಿದುಕೊಂಡವರಿಗೆ ಭಯವಾಗಿದೆ,ಇಷ್ಟು ಶತಮಾನಗಳವರೆಗೆ ಸಮಾಜಕ್ಕೆ ಹಿಡಿಸಿದ್ದ ಬೌದ್ಧಿಕ ಗುಲಾಮಗಿರಿ ಬಿಟ್ಟುಬಿಟ್ಟರೆ ಹೇಗೆ? ಎಲ್ಲಾ ಕಡೆಯಲ್ಲೂ ಭದ್ರ ಮಾಡಿಕೊಳ್ಳುತ್ತಲಿರುವ ಕುರ್ಚಿಗಳು ಅಲುಗಾಡಿದರೆ ತಮ್ಮ ಜಾತಿಯ ಗತಿ ಏನು ಎಂಬ ಭಯ, ಅದಕ್ಕೆ ಜಾತಿ ಎಂಬ ಪದ ಕೇಳಿದೊಡನೆ ಹೌಹಾರುತ್ತಾರೆ. ಇಂತಹವು ಜಾಸ್ತಿಯಾದರೆ ಮುಂದೆ ಅವರು ಬೇರೆಯವರಿಗೆ ಉತ್ತರದಾಯಿಗಳಾಬೇಕಾಗುತ್ತದೆ. ಅದಕ್ಕೆ ಇಲ್ಲದ್ದಕ್ಕೆ ವಿಪರೀತಾರ್ಥ ಕೊಟ್ಟು ಗದ್ದಲ ಎಬ್ಬಿಸಿ ಗೆದ್ದಿದ್ದಾರೆ. ಆದರೆ ತಾತ್ಕಾಲಿಕ ಗೆಲುವುಗಳು ಜಿಜ್ಞಾಸೆಯನ್ನಾಗಲಿ ಅಥವಾ ಪ್ರಶ್ನೆಗಳನ್ನಾಗಲಿ ತಡೆಯಲಾಗದು. ಅನ್ಯಾಯ ನ್ಯಾಯವಾಗದು. ಇದೇ ಚಿತ್ರದ ಕೊನೆಯಲ್ಲಿ "ನ್ಯಾಯ ಸೋತರು ಧರ್ಮ ಗೆಲ್ಲುತ್ತದೆ, ಧರ್ಮೋ ರಕ್ಷತಿ ರಕ್ಷಿತಃ" ಎಂದು ಚಿತ್ರ ಕೊನೆಯಾಗುತ್ತದೆ. ಆ ಧರ್ಮದ ಅರ್ಥ ಮೊದಲು ಧರ್ಮದ ಮುಖವಾಣಿಗಳಿಗೆ ಅರ್ಥವಾಗಲಿ..!!
"ಸತ್ಯ ಧರ್ಮಾಯಾ ದೃಷ್ಟಯೇ..."
Comments