ಶ್ರೀ_ಆದಿ_ಶಂಕರಾಚಾರ್ಯರ_ಜಯಂತಿಯ_ಶುಭಾಶಯಗಳು..😍💐🙏
ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ ಧರ್ಮೀಯರಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ತಾನಗೊಳಿಸಿದವರು ಶ್ರೀ ಶಂಕರಾಚಾರ್ಯರು. ತಾವು ಬದುಕಿದ್ದು ಕೇವಲ 32 ವರ್ಷಗಳಷ್ಟೇ ಆದರೂ ಆದಿ ಶಂಕರರು ತಾವು ಮಾಡಿದ ಕಾರ್ಯ, ಗಳಿಸಿದ ಕೀರ್ತಿ , ಅಪಾರವಾದುದು. ಶ್ರೀಮದ್ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳಿಗೆ ಭಾಷ್ಪಗಳನ್ನು ಬರೆದ ಮೊದಲಿಗರು ಶ್ರೀಶಂಕರಾಚಾರ್ಯರು. ಶಂಕರಾಚಾರ್ಯರು ಭಾರತೀಯ ವೈಚಾರಿಕ ರಂಗದಲ್ಲಿ ಕ್ರಾಂತಿಯನ್ನೇ ಮಾಡಿದ್ದವರು. ಇವರು ಯಾವೊಂದು ಹೊಸತಾದ ಮತ, ಪಂಥಗಳನ್ನು ಸ್ಥಾಪಿಸಿಲ್ಲವಾದರೂ ಹಿಂದೂ ಧರ್ಮದಲ್ಲಿನ ವೇದಸಂಪ್ರದಾಯವನ್ನೇ ಎತ್ತಿಹಿಡಿದರು. ವೇದಗಳಲ್ಲಿನ ಸತ್ವವನ್ನೂ, ಸಾರವನ್ನು ತಮ್ಮದೇ ಆದ ನೆಲೆಯಲ್ಲಿ ನಿಷ್ಕರ್ಷಿಸುವ ಮೂಲಕ ಜಗತ್ತಿಗೆ ಪ್ರಕಾಶಪಡಿಸಿದವರು ಆಚಾರ್ಯ ಶಂಕರರು ಎಂದರೆ ತಪ್ಪಾಗಲಾರದು. ಅದು ಎಂಟು-ಒಂಭತ್ತನೇ ಶತಮಾನಗಳ ಮಧ್ಯದ ಅವಧಿ. ಭಾರತ ದಕ್ಷಿಣ ಸಮುದ್ರ ತೀರದ ಕೇರಳ ರಾಜ್ಯದ ಕಾಲಟಿ ಎಂಬೊಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ಶಿವಗುರು ಹಾಗೂ ಆರ್ಯಾಂಬರೆನ್ನುವ ಬಡ ಬ್ರಾಹ್ಮಣಾ ದಂಪತಿಗಳು ವಾಸವಾಗಿದ್ದರು. ಊಟ, ವಸತಿಗಳ ಎಲ್ಲಾ ಅದು ಹೇಗೋ ದಿನನಿತ್ಯವೂ ನಡೆಯುತ್ತಿದ್ದರೂ ಆ ದಂಪತಿಗಳೈಗೆ ‘ತಮ್ಮದಾದ ಒಂದು ಮಗುವಿಲ್ಲ, ತಮಗೆ ಸಂತಾನಭಾಗ್ಯವಿಲ್ಲ’ ಎನ್ನುವ ಚಿಂತೆಯು ಬಲವಾಗಿ ಕಾಡುತ್ತಿತ್ತು. ಹೀಗಿರಲು ಇದೇ ಚಿಂತೆಯಲ್ಲಿ ಆ ಈರ್ವರೂ ತಾವು ಈ ಕುರಿತು ಪರಮೇಶ್ವರನ ಮೊರೆಹೋಗಲು ತೀರ್ಮಾನಿಸಿ ಅದರಂತೆ ಪರಮೇಶ್ವರನನ್ನು ಶ್ರದ್ದಾ ಭಕ್ತಿಗಳಿಂದ ಆರಾಧಿಸಿಲು ಮುಂದಾದಾರು. ಅದೊಂದು ದಿನ ಪರಮೇಶ್ವರನು ತಾನು ಶಿವಗುರುವಿನ ಕನಸಿನಲ್ಲಿ ಕಾಣಿಸಿಕೊಂಡು- “ಭಕ್ತಾ, ನಿನ್ನ ಪೂಜೆಗೆ ಮೆಚ್ಚಿದ್ದೇನೆ. ನಿನ್ನ ಕೋರಿಕೆಯನ್ನು ನಾನು ಈಡೇರಿಸಲಿದ್ದೇನೆ, ನಿನಗೆಂತಹಾ ಮಗನು ಬೇಕು? ಮಹಾನ್ ಜ್ಞಾನಿಯಾದ, ಆದರೆ ಅಲ್ಪಾಯುವದ ಮಗನು ಬೇಕೋ, ಇಲ್ಲವೇ ಅಲ್ಪ ಜ್ಞಾನಿಯಾದ ದೀರ್ಘಾಯುವಾದ ಮಗನು ಬೇಕೋ?” ಎಂದೆನ್ನಲು ಶಿವಗುರುವು ತಾನು ಕ್ಷಣಕಾಲವೂ ಯೋಚಿಸದೆ- “ನನಗೆ ಮಹಾಜ್ಞಾನಿಯಾದ ಮಗನು ಬೇಕು” ಎಂದೆನ್ನಲು “ತಥಾಸ್ತು” ಎಂದ ಪರಮೇಶ್ವರನು ತಾನು ಅಂತರ್ಧಾನನಾದನು. ಅದಾದ ಕೆಲ ತಿಂಗಳಿನಲ್ಲಿಯೇ ಮಾತೆ ಆರ್ಯಾಂಬಾ ಜನ್ಮತಃ ಮಹಾಜ್ಞಾನಿಯಾದ ಶಂಕರನಿಗೆ ಜನ್ಮವಿತ್ತಳು.
ಕೆಲ ಕಾಲಾ ನಂತರದಲ್ಲಿ ಶಂಕರನಿಗೆ ಮೂರು ವರ್ಷಗಳಿರಲು ಅವನ ತಂದೆ ಶಿವಗುರುವು ತಾನು ಇಹದ ಯಾತ್ರೆಯನ್ನು ಪೂರೈಸಿದನು. ಮುಂದೆ ಶಂಕರನು ಪೂರ್ಣವಾಗಿ ತಾಯಿಯ ಆರೈಕೆಯಲ್ಲಿಯೇ ಬೆಳೆಯುವಂತಾಯಿತು. ಹುಟ್ಟು ಜ್ಞಾನಿಯಾಗಿದ್ದ ಶಂಕರನಿಗೆ ವಿದ್ಯಾಭ್ಯಾಸದ ಹಂಗಿರಲಿಲ್ಲ. ಆದರೂ ತಾನು ಕೆಲ ಕಾಲ ವೇದ ಶಾಸ್ತ್ರಗಳ ಅಧ್ಯಯನದಲ್ಲಿ ತೊಡಗಿದ್ದನು. ಹೀಗೆ ತಾನು ವಿದ್ಯಾಭ್ಯಾಸಕ್ಕೆಂದು ಹೋಗುವ ದಾರಿಯಲ್ಲಿ ಇದ್ದ ಒಬ್ಬ ಹಳೆಯ ಮುದುಕಿಯ ಮನೆಯಿತ್ತು. ಆ ಮುದುಕಿ ಬಾಲಕ ಶಂಕರ ಬಂದಾಗ ತಿನ್ನಬಹುದಾದ ವಸ್ತು ತನ್ನಲ್ಲೇನಿರುತ್ತಿತ್ತೋ ಅದರಲ್ಲೊಂದು ಭಾಗವನ್ನು ಅವನಿಗೆ ತಪ್ಪದೇ ನೀಡುತ್ತಿದ್ದಳು. ಅದೊಂದು ದಿನ ಶಂಕರ ಬಂದ ಸಮಯದಲ್ಲಿ ಮುದುಕಿಗೆ ಅವನಿಗಾಗಿ ನೀಡಲು ಏನೇನೂ ಇರಲಿಲ್ಲ. ಅದನ್ನು ಆಕೆಯು ತಾನು ವಿನಮ್ರಳಾಗಿ ಶಂಕರನಿಗೆ ತಿಳಿಸಲು ಶಂಕರನು ತಾನು ಅದೇ ಸ್ಥಳದಲ್ಲಿ ‘ಶ್ರೀ ಕನಕಧಾರಾ ಸ್ತೋತ್ರ’ವನ್ನು ಪಠಿಸಿ ಸಾಕ್ಷಾತ್ ಲಕ್ಷ್ಮಿದೇವಿಯಿಂದ ಬಂಗಾರದ ನಾಣ್ಯಗಳ ಮಳೆಯನ್ನು ಸುರಿಸಿದನು.
ಸುಮಾರು ಇದೇ ಸಮಯದಲ್ಲಿ ಬಾಲಕ ಶಂಕರನ ಜ್ಞಾನ ಮಹತ್ತಿನ ಅರಿವುಂಟುಮಾಡುವ ಘಟನೆಯೊಂದು ಜರುಗಿತು. ಆ ಸಮಯದಲ್ಲಿ ಕೇರಳವನ್ನಾಳುತ್ತಿದ್ದ ರಾಜಾ ರಾಜಶೇಖರನು ತಾನೊಮ್ಮೆ ಶಂಕರನನ್ನು ಆಸ್ಥಾನಕ್ಕೆ ಕರೆತರಲು ಆದೇಶಿಸಿದಮು. ಮತ್ತು ಆ ಬಾಲಕನ ಅಗಾಧವಾದ ಪಾಂಡಿತ್ಯವನ್ನು ಪರೀಕ್ಷಿಸಲು ಬಯಸಿದನು. ಶಂಕರನನ್ನು ಆಸ್ಥಾನಕ್ಕೆ ಕರೆದು ತರಲು ತನ್ನ ಪ್ರಧಾನ ಮತ್ತು ಆನೆಯ ಜೊತೆಗೆ ಆಮಂತ್ರಣವನ್ನು ಕಳುಹಿಸಿದನು. ಆಮಂತ್ರಣವನ್ನು ನೋಡಿದ ಬಾಲಕ ಶಂಕರನು "ಉಪಜೀವನ ಮಾಡಲು ಭಿಕ್ಷೆಯೇ ಯಾರ ಸಾಧನೆಯಾಗಿದೆಯೋ, ತ್ರಿಕಾಲ ಸಂಧ್ಯಾ ಈಶ್ವರ ಚಿಂತನ, ಪೂಜೆ-ಅರ್ಚನೆ ಮತ್ತು ಗುರುಸೇವೆಯೇ ಯಾರ ಜೀವನದ ನಿತ್ಯ ವ್ರತವಾಗಿದೆಯೋ ಅವರಿಗೆ ಈ ಆನೆಯ ಸವಾರಿ ಯಾಕೆ? ನಾಲ್ಕು ವರ್ಣದ ಸರ್ವ ಕರ್ತವ್ಯಗಳ ಪಾಲನೆ ಮಾಡಿ ಬ್ರಾಹ್ಮಣಾದಿ ಧರ್ಮಮಯ ಜೀವನ ಜೀವಿಸಲು ವ್ಯವಸ್ತೆ ಮಾಡುವುದು ರಾಜನ ಕರ್ತವ್ಯವಾಗಿದೆ. ನನ್ನ ಈ ಸಂದೇಶವನ್ನು ನಿನ್ನ ಸ್ವಾಮಿಗೆ ಹೇಳು", ಎನ್ನುವ ಮೂಲಕ ಆಮಂತ್ರಣವನ್ನು ನಿರಾಕರಿಸಿದನು.
ಇದಾದ ನಂತರ ರಾಜನು ತಾನೇ ಸ್ವತಃ ಶಂಕರನನ್ನು ಭೇಟಿಯಾಗಲು ನಿರ್ಧರಿಸಿ ಹೊರಟನು. ಹಾಗೆ ಆದಂತಹಾ ಭೇಟಿ ಮತ್ತು ಆ ವೇಳೆಯಲ್ಲಿ ನಡೆಸಿದ ಧಾರ್ಮಿಕ ಚರ್ಚೆಗಳಿಂದ ಮಹಾರಾಜನಲ್ಲಿ ವಿಶೇಷವಾದ ವಿಚಾರ ಶಕ್ತಿಯ ಅನುಭವವಾಯಿತು. ರಾಜನು ತನ್ನ ಭಾಟಿಯ ಅಂತ್ಯದಲ್ಲಿ ರತ್ನದ ಮುದ್ರೆಗಳನ್ನು ಶಂಕರನಿಗೆ ಕೊಡುಗೆ ನೀದಲು ಮುಂದಾದಾಗ ಬಾಲಕನು ಅವುಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾ- "ಮಹಾರಾಜರೇ, ನಾನು ಬ್ರಾಹ್ಮಣ ಮತ್ತು ಬ್ರಹ್ಮಚಾರಿಯಾಗಿದ್ದೇನೆ, ಇದರಿಂದ ನನಗೇನು ಉಪಯೋಗವಿದೆ? ನೀವು ದೇವರ ಪೂಜೆಗೆ ಕೊಟ್ಟಿರುವ ಭೂಮಿ ನನಗೆ ಮತ್ತು ನನ್ನ ತಾಯಿಗೆ ಸಾಕು. ನಿಮ್ಮ ಕೃಪೆಯಿಂದ ನನಗೆ ಯಾವ ಪ್ರಕಾರದ ಅಭಾವವಾಗಿಲ್ಲ" ಎಂದುತ್ತರಿಸಿದನು. ಶಂಕರನ ಉತ್ತರ ರಾಜನಿಗೆ ತಿಳಿಯಲಿಲ್ಲ. ಕೊನೆಗೆ ರಾಜನು ಶಂಕರನಿಗೆ ಕೈಮುಗಿದು "ನಿಮ್ಮ ದರ್ಶನದಿಂದ ನಾನು ಧನ್ಯನಾದೆ", ಎಂದು ಹೇಳಿ ಅವರಿಗೆ ದುಡ್ಡನ್ನು ಅರ್ಪಣೆಮಾಡಿ "ಒಂದು ಸಲ ಅರ್ಪಣೆ ನೀಡಿ ಅದನ್ನು ಮತ್ತೆ ನಾನು ತೆಗೆದುಕೊಳ್ಳುವುದು ಸರಿಯಲ್ಲ, ಅದಕ್ಕೆ ನೀವೇ ಆ ಹಣವನ್ನು ಯೋಗ್ಯ ವ್ಯಕ್ತಿಗೆ ಕೊಡಿರಿ", ಎಂದನು. ಮುಗುಳ್ನಗುತ್ತಾ ಶಂಕರರು "ಮಹಾರಾಜರೆ, ನೀವು ರಾಜರಾಗಿದ್ದು ಯಾರು ಸುಪಾತ್ರರು, ಯಾರು ಯೋಗ್ಯರಂದು ನಿಮಗೆ ತಿಳಿದಿರಬೇಕು, ನನ್ನಂಥ ಬ್ರಹ್ಮಚಾರಿಗೇನು ಇಂಥಹ ಜ್ಞಾನ ಇರಬಹುದು? ವಿದ್ಯಾದಾನವೇ ಬ್ರಾಹ್ಮಣನ ಧರ್ಮ ಮತ್ತು ಸತ್ಪಾತ್ರೆದಾನವೇ ರಾಜಧರ್ಮವಾಗಿದೆ. ನೀವೆ ಯೋಗ್ಯ ಸತ್ಪಾತ್ರನಿಗೆ ಈ ಧನವನ್ನು ನೀಡಿ", ಎಂದರು. ರಾಜನು ನಿರುತ್ತರನಾಗಿ ಶಂಕರನಿಗೆ ವಂದಿಸಿ ಅಲ್ಲಿರುವ ಬ್ರಾಹ್ಮಣರಿಗೆ ಆ ಧನವನ್ನು ಹಂಚಿದನು.
ಇದಾಗಿ ಶಂಕರನು ತಾನು ವಿದ್ಯಾಭ್ಯಾಸಗಳನ್ನೆಲ್ಲಾ ಪೂರೈಸುತ್ತಲೂ ತಾನು ಸನ್ಯಾಸ ಸ್ವೀಕರಿಸುವುದಾಗಿ ತಾಯುಯಲ್ಲಿ ಅಪ್ಪಣೆ ಬೇಡಿದರು. ಆದರೆ ತಾಯಿಗೆ ಮಗನು ಸನ್ಯಾಸಿಯಾಗುವುದು ಇಷ್ಟವಿರಲಿಲ್ಲ. ‘ಇದ್ದ ಒಬ್ಬನೇ ಮಗನು ಸನ್ಯಾಸಿಯಾದರೆ ನಮ್ಮ್ ಅವಂಶಗ ಗತಿಯೇನು, ನಾನು ಒಮ್ಮೆ ತೀರಿಹೋದಲ್ಲಿ ನನಗೆ ಮೋಕ್ಷ ಕೊಡಿಸುವವರಾರು?’ ಎಂಬ ಚಿಂತೆ ಅವಳ ಮನವನ್ನು ಕೊರೆಯುತ್ತಿರಲು ತಾಯಿಯು ಮಗನ ಸನ್ಯಾಸ ದೀಕ್ಷೆಯ ಅಬಿಲಾಷೆಯನ್ನು ಮುಂದೂಡುತ್ತಾ ಬಂದಳು.
ಶಂಕರರು ತಾವು ಸನ್ಯಾಸಿಯಾಗುವುದಾಗಿ ನಿರ್ಧರಿಸಿಯಾಗಿತ್ತು. ಅದಕ್ಕಾಗಿ ತಾಯಿಯ ಮನವೊಲಿಸಲು ಪರಿಪರಿಯಾಗಿ ಪ್ರಯತ್ನಿಸಿದರೂ ಸಾಧ್ಯವಾಗದಿರಲು ಅದೊಂದು ದಿನ ತಾವು ನದಿಯಲ್ಲಿ ಸ್ನಾನಕ್ಕಾಗಿ ಇಳಿದಿರಲು ಅಲ್ಲಿದ್ದ ಒಂದು ಮೊಸಳೆಯು ಶಂಕರರ ಕಾಲನ್ನು ಬಲವಾಗಿ ಹಿಡಿದುಕೊಂಡಿತು. ಅದಾಗ ರಕ್ಷಣೆಗಾಗಿ ಎಂಬಂತೆ ತಾಯಿಯನ್ನು ಕೂಗಿದ ಶಂಕರರು ತಾಯಿಗೆ- “ಅಮ್ಮಾ ಈ ಮೊಸಳೆಯು ನನ್ನನ್ನು ನುಂಗಿ ಹಾಕುವುದರಲ್ಲಿದೆ, ನೀನೇನಾದರೂ ನಾನು ಸನ್ಯಾಸಿಯಾಗುವುದಕ್ಕೆ ಒಪ್ಪಿಕೊಳ್ಳುವುದಾದಲ್ಲಿ ಮಾತ್ರವೇ ನಾನು ಈ ಮೊಸಳೆಯ ಹಿಡಿತದಿಂದ ಪಾರಾಗಬಲ್ಲೆ, ಇಲ್ಲವಾದಲ್ಲಿ ನಿನ್ನ ಮಗ ಇದೇ ಕ್ಷಣ ಮೊಸಳೆಯ ಪಾಲಾಗುತ್ತಾನೆ”, ಎಂದಾಗ ಮಾತೆ ಆರ್ಯಾಂಬಾ ತಾನು ವಿಧಿಯಿಲ್ಲದೆ ಮಗನ ಸನ್ಯಾಸಕ್ಕೆ ಅಪ್ಪಣೆ ಕೊಡಬೇಕಾಯಿತು. ತಕ್ಷಣವೇ ಮೊಸಳೆಯು ಶಂಕರರ ಕಾಲನ್ನು ಬಿಟ್ಟಿತು. ಶಂಕರರು ತಾಯಿಯ ಆಶೀರ್ವಾದವನ್ನು ಪಡೆದು ಸನ್ಯಾಸಿಯಾಗಿ ದೇಶಪರ್ಯಟನೆಗೆ ಹೊರಟರು. ಹಾಗೆ ಹೊರಡುವ ಮುನ್ನ ತಾಯಿಗೆ- “ನಾನೆಲ್ಲೇ ಇದ್ದರೂ ನಿನ್ನ ಅಂತಿಮ ಕ್ಷಣಗಳಲ್ಲಿ ನಿನ್ನೊಂದಿಗಿರುತ್ತೇನೆ” ಎನ್ನುವ ವಚನವನ್ನಿತ್ತರು. ಮತ್ತು ಮುಂದೊಂದು ದಿನ ಮಾತೆ ಆರ್ಯಾಂಬಾರವರು ಸಾವಿನ ನಿರೀಕ್ಷೆಯಲ್ಲಿದ್ದಾಗ ಅಲ್ಲಿಗಾಗಮಿಸಿದ ಶಂಕರರು ತಾವು ತಾಯಿಯವರ ಅಂತಿಮ ಕ್ಶಣಗಳಲ್ಲಿ ಅವರೊಡನಿದ್ದುದಲ್ಲದೆ ಅವರ ಅಂತಿಮ ವಿದ್ಜಿಗಳನ್ನೂ ಸಹ ನೆರವೇರಿಸಿ ಅವರ ಶಾಶ್ವತ ಮೋಕ್ಷಕ್ಕೆ ಕಾರಣರಾದರು.
ಶ್ರೀ ಶಂಕರರು ಸನ್ಯಾಸ ಸ್ವೀಕರಿಸುವುದರೊಡನೆ ಅವರ ಜೀವನವು ನೂತನ ತಿರುವನ್ನು ಪಡೆಯಿತು. ಅಷ್ತರ ಬಳಿಕ ಶಂಕರರು ದೇಶ ದೇಶಗಳನ್ನು ತಿರುಗುತ್ತಾ ನರ್ಮದಾ ನದಿ ತೀರಕ್ಕೆ ಬಂದರು. ಅಲ್ಲಿ ನೆಲೆಯಾಗಿದ್ದ ಶ್ರೀ ಗೋವಿಂದ ಭಗವತ್ಪಾದರನ್ನು ತಮ್ಮ ಗುರುವಾಗಿ ಸ್ವೀಕರಿಸಿದ ಶಂಕರರು ಅವರಲ್ಲಿ ಯೋಗ, ವೇದ, ಉಪನಿಷತ್, ವೇದಾಂತ ಶಾಸ್ತ್ರಗಳನ್ನು ಅಭ್ಯಾಸ ನಡೆಸಿದರು. ನರ್ಮದೆ ತಟದಲ್ಲಿನ ಗುಹೆಯೊಂದರಲ್ಲಿ ಧ್ಯಾನದಲ್ಲಿದ್ದಾಗಲೇ ಶಂಕರರು ತಮ್ಮ `ಅದ್ವೈತ’ ತತ್ವ ಸ್ವರೂಪದ ಜ್ಞಾನವನ್ನು ಕಂಡುಕೊಂಡರು. ಮತ್ತು ಅದನ್ನು ದೇಶದಾದ್ಯಂತ ಪ್ರಚುರಪಡಿಸಲಿಕ್ಕಾಗಿ ದೇಶಾತನೆಗೈಯ್ಯಲು ನಿರ್ಧರಿಸಿದರು. ಶಂಕರರು ಗುರುಗಳ ಆಶೀರ್ವಾದ ಪಡೆದು ಕಾಶಿಗೆ ಹೊರಟರು. ಅಲ್ಲಿ ಸನಂದನನೆಂಬ ತಮಿಳು ದೇಶದ ಯುವ ಸಂನ್ಯಾಸಿ ಇವರ ಶ್ಯಿಷ್ಯನಾದನು. ಕಾಶಿಗೆ ತೆರಳಿದ ಶ್ರೀ ಶಂಕರರು ಅಲ್ಲಿ ಕೆಲ ಶಿಷ್ಯರನ್ನು ಸೇರಿಸಿಕೊಂಡು ಅವರಿಗೆ ವೇದ ಶಾಸ್ತ್ರಗಳ ಪಾಠವನ್ನು ಬೋಧಿಸಿದರು.
ಕಾಶಿಯಲ್ಲಿ ವಿಶ್ವೇಶ್ವರ ದೇವಾಲಯಕ್ಕೆ ಹೋಗುವಾಗ ನಡೆದ ಒಂದು ಘಟನೆ ಹೀಗಿದೆ- ಒಬ್ಬ ಅಸ್ಪೃಷ್ಯ ವ್ಯಕ್ತಿಯು ನಾಲ್ಕೈದು ಕುರಿಗಳೊಡನೆ ಅಡ್ಡವಾಗುತ್ತಾನೆ. ಆಗ ಶಂಕರರು ಅವನನ್ನು ಕುರಿತು “ಪಕ್ಕಕ್ಕೆ ಸರಿದು ದಾರಿ ಮಾಡಿಕೊಡು, ನಾನು ದೇವರ ದರ್ಶನಕ್ಕೆ ಹೋಗಬೇಕಿದೆ” ಎನ್ನಲು ಆ ವ್ಯಕ್ತಿಯು ತಕ್ಷಣಕ್ಕೆ “ನೀವು ಹೇಳಿದ್ದು ಯಾರಿಗೆ, ನನ್ನ ದೇಹಕ್ಕೋ? ಆತ್ಮಕ್ಕೋ?” ಎಂದು ಪ್ರಶ್ನಿಸುತ್ತಾನೆ. ಇದರಿಂದ ಎಚ್ಚರಗೊಂಡ ಶಂಕರರು ತಾವೇ ಕಂಡುಕೊಂಡ ಅದ್ವೈತ ಸಿದ್ದಾಂತವನ್ನು ನಮ್ಮದೇ ಜೀವನದಲ್ಲಿ ಕಾರ್ಯಗತಗೊಳಿಸುವುದಕ್ಕಾಗಿ ಸಾಕ್ಷಾತ್ ಪರಮೇಶ್ವರನು ಈ ರೂಪದಲ್ಲಿ ಬಂದಿರುವನೆನ್ನುವುದನ್ನು ಅರಿತು ‘ಮನೀಷಿ ಪಂಚಕ’ ಎಂಬ ಸ್ತೋತ್ರದೊಡನೆ ಪರಮೇಶ್ವರನನ್ನು ಸ್ತುತಿಸುತ್ತಾರೆ.
ಶ್ರೀ ಶಂಕರಾಚಾರ್ಯರಿಗೆ ಹದಿನಾರರ ವಯಸ್ಸಿನಲ್ಲಿರುವಾಗ, ಅವರಿಗೆ ವೇದವ್ಯಾಸರ ಅನುಗ್ರಹವಾಯಿತು. ಅದೊಂದು ದಿನ ಒಬ್ಬ ಹಳೆಯ ವೃದ್ದರೋರ್ವರು ಶಂಕರರು ರಚಿಸಿದ್ದ ‘ಬ್ರಹ್ಮಸೂತ್ರ ಬಾಷ್ಯ’ದ ಕುರಿತಾಗಿ ವಿಮರ್ಶಾತ್ಮಕ ಚರ್ಚೆಗೆ ತೊಡಗಿದರು. ಶಂಕರ ಹಾಗೂ ಆ ವಯೋವೃದ್ದ್ರ ನಡುವಿನ ಚರ್ಚೆಯು ದಿನಗಳನ್ನು ಪೂರೈಸಿತು. ಹೀಗಿರಲು ಶಂಕರಾಚಾರ್ಯರಿಗೆ ಒಮ್ಮೆಲೇ ತಾನು ವಾದ ಹೂಡಿರುವುದು ಸ್ವತಃ ಬ್ರಹ್ಮಸೂತ್ರದ ಕತೃವಾದ ವೇದವ್ಯಾಸ ಮಹರ್ಷಿಗಳೊಡನೆ ಎನ್ನುವುದು ಅರಿವಿಗೆ ಬಂದಿತು. ತಕ್ಷಣವೇ ತನ್ನಿಂದಾದ ತಪ್ಪಿಗಾಗಿ ವ್ಯಾಸಮಹರ್ಷಿಗಳ ಚರಣಗಳಿಗೆರಗಿದ ಶಂಕರರು ಅವರಲ್ಲಿ ಕ್ಷಮೆಯನ್ನು ಯಾಚಿಸಿದರು. ಇದಕ್ಕೆ ಪ್ರತಿಕ್ರಯಿಸಿದ ವ್ಯಾಸರು ಶಂಕರರಿಗೆ ಮತ್ತೆ 16 ವರ್ಷಗಳ ಆಯಸ್ಸನ್ನು ವರವಾಗಿ ನೀಡಿ “ನೀನು ನಿನ್ನಲ್ಲಿರುವ ಜ್ಞಾನವನ್ನು ಇಡೀ ದೇಶಕ್ಕೆ ಪಸರಿಸು. ಇದರಿಂದ ಒಳಿತಾಗುತ್ತದೆ. ನೀನು ರಚಿಸಿದ ಈ ಬ್ರಹ್ಮಸೂತ್ರ ಬಾಷ್ಯಕ್ಕೆ ನನ್ನ ಸಂಪೂರ್ಣ ಸಹಮತವಿದೆ” ಎನ್ನುವುದಾಗಿ ಅನುಗ್ರಹಿಸಿದರು.
ಮುಂದೆ ಶ್ರೀ ಶಂಕರಾಚಾರ್ಯರು ದೇಶದ ನಾನಾ ಮೂಲೆಗಳಾನ್ನು ತಿರುಗಿ ವಿವಿಧ ಪಂಗಡಗಳಾ ಮುಖಂಡರ್ನ್ನೂ ವಿವಿಧ ಧಾರ್ಮಿಕ ವಿಚಾರವಾದಿಗಳನ್ನೂ ಸಂಧಿಸಿದ್ದಲ್ಲದೆ ಹಲವಾರು ಜನರನ್ನು ಆಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿದರು. ಕುಮಾರಿಲ ಭಟ್ಟ, ಮಂಡನ ಮಿಶ್ರರಾದಿಯಾಗಿ ನಾನಾ ವಿದ್ವಾಂಶರನ್ನು ವಾದದಲ್ಲಿ ಮಣಿಸಿದ ಶಂಕರರು ತಾವು ಸರ್ವಜ್ಞಪೀಠವನ್ನೇರಿದರು. ಹಾಗೆಯೇ ಮುಂದೆ ಹಿಂದೂ ಧರ್ಮ ಜಾಗೃತಿ ಮೂಡಿಸುವ ಸಲುವಾಗಿ, ತಾವು ಕಂಡುಕೊಂಡ ‘ಅದ್ವೈತ’ ತತ್ವದ ಪ್ರಚಾರಕ್ಕಾಗಿ ದೇಶದ ನಾಲ್ಕು ಮೂಲೆಗಳಲ್ಲೆ ನಾಲ್ಕು ಆಮ್ನಾಯ ಪೀಠ (ಉತ್ತರದಲ್ಲಿ ಬದರಿ ಉತ್ತರಾಮ್ನಾಯ ಜ್ಯೋತಿರ್ಪೀಠ, ದಕ್ಷಿಣದಲ್ಲಿ ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠ, ಪೂರ್ವದಲ್ಲಿ ಪುರಿ ಪೂರ್ವಾಮ್ನಾಯ ಪೀಠ ಹಾಗೂ ಪಶ್ಚಿಮದಲ್ಲಿ ದ್ವಾರಕೆ ಪಶ್ಚಿಮಾಮ್ನಾಯ ಪೀಠ)ಗಳನ್ನು ಸ್ಥಾಪಿಸಿದರು. ಆ ನಾಲ್ಕೂ ಮಠಗಳು ಇಂದಿಗೂ ತಮ್ಮ ಪರಂಪರೆಯನ್ನು ಮುಂದುವರಿಸಿದ್ದು ಅಸಂಖ್ಯಾತ ಶಿಷ್ಯವರ್ಗವನ್ನು ಹೊಂದಿವೆ. ಮುಂದೆ ಶ್ರೀ ಶಂಕರಾಚಾರ್ಯರು ತಾವು ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆಗಳಿಗೆ ಬಾಷ್ಯಗಳನ್ನು ಬರೆದರು. ಇವರು ರಚಿಸಿದ ‘ಭಜಗೋವಿಂದಂ’, ‘ಸೌಂದರ್ಯ ಲಹರೀ’, ‘ಕನಕಧಾರಾ ಸ್ತೋತ್ರ’ ಗಳು ಬಹು ಪ್ರಸಿದ್ದವಾಗಿವೆ.
ಹೀಗೆ ಹಿಂದೂ ಧರ್ಮದ ಉದ್ದಾರಕರಾಗಿ, ಧರ್ಮ ಸಂಸ್ಥಾಪನೆಗಾಗಿ ಮಠಗಳ ಮೂಲಕ ಧಾರ್ಮಿಕ ಜಾಗೃತಿಯನ್ನುಂಟುಮಾಡಿದ ದಿವ್ಯ ಚೇತನ ಶ್ರೀ ಶಂಕರಾಚಾರ್ಯರು ತಾವು ತಮ್ಮ 32 ನೇ ವಯಸ್ಸಿನಲ್ಲಿ ಶ್ರೀ ಬದರೀ ಕ್ಷೇತ್ರದಲ್ಲಿ ಮಹಾಸಮಾಧಿಯನ್ನು ಹೊಂದಿದರು..
ಜೈ ಹಿಂದ್ 🇮🇳
- Suki Shetty

Comments