ಅಖಂಡ_ಭಾರತ_ಸಂಕಲ್ಪ_ದಿನ_ಅಗಸ್ಟ್_14..🙏🇮🇳
#ಅಖಂಡ_ಭಾರತ_ಸಂಕಲ್ಪ_ದಿನ_ಅಗಸ್ಟ್_14
ವಿಭಜನೆಯ ಬೀಜ ಸ್ವಾತಂತ್ರ್ಯಕ್ಕಿಂತ ಮುಂಚೆ, ಭಾರತ ರಾಷ್ಟ್ರೀಯವಾದಿ ಗುಂಪುಗಳ ವೈರುಧ್ಯಗಳ ಕಾರಣದಿಂದ ಬಿತ್ತಲಾಯಿತು. ಹಿಂದೂ ಬಹುಮತದಿಂದ ಮುಸ್ಲಿಮರು ಬೆದರಿದರೆ, ರಾಷ್ಟ್ರೀಯ ನಾಯಕರು ಮುಸ್ಲಿಮರನ್ನು ಓಲೈಸುವುದನ್ನು ಕಂಡು ಹಿಂದೂಗಳಿಗೆ ಅಸಮಾಧಾನ.
೧೯೦೬ರಲ್ಲಿ ಢಾಕಾದಲ್ಲಿ ಅಸ್ತಿತ್ವಕ್ಕೆ ಬಂದ ಅಖಿಲ ಭಾರತ ಮುಸ್ಲಿಂ ಲೀಗ್ ಭಾರತೀಯ ರಾಷ್ಟ್ರೀಯ #ಕಾಂಗ್ರೆಸ್ ನಿಂದ ಅಸಮಾಧಾನಗೊಂಡ ಮುಸ್ಲಿಮರು ಹುಟ್ಟುಹಾಕಿದ ಪಕ್ಷ. ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಟ್ಟವರಲ್ಲಿ ಅಲ್ಲಮ ಇಕ್ಬಾಲ್ ಮೊದಲಿಗರಾಗಿದ್ದರು. ಸಿಂಧ್ ವಿಧಾನ ಪರಿಷತ್ತು ೧೯೩೫ರಲ್ಲಿ ಇಂತಹ ಒಂದು ನಿರ್ಣಯ ಕೈಗೊಂಡಿತು. ಇಕ್ಬಾಲ್ ಮತ್ತಿತರ ನಾಯಕರು ಕೊನೆಗೂ ಹಿಂದೂ-ಮುಸ್ಲಿಂ ಏಕತೆಗೆ ಹೋರಾಡುತ್ತಿದ್ದ ಮೊಹಮ್ಮದ್ ಅಲಿ ಜಿನ್ನಾರನ್ನು ತಮ್ಮತ್ತ ಸೆಳೆಯುವುದರಲ್ಲಿ ಸಫಲರಾದರು. ಇದರ ನಂತರ ಪ್ರತ್ಯೇಕತಾವಾದಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಜಿನ್ನಾ, ಹಿಂದೂ ಮತ್ತು ಮುಸ್ಲಿಮರ ವೈಪರೀತ್ಯಗಳನ್ನು ಎತ್ತಿ ತೋರಿಸಿ ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗನ್ನು ಜೋರು ಮಾಡಿದರು. ಆದರೆ ಜಾತ್ಯತೀತವಾದಿಗಳಾದ ಕಾಂಗ್ರೆಸ್ ನಾಯಕರು ಧರ್ಮದ ಆಧಾರದ ಮೇಲೆ ದೇಶದ ವಿಭಜನೆಯ ಕಲ್ಪನೆಯನ್ನು ವಿರೋಧಿಸಿದರು. ಬಹು ವರ್ಷಗಳ ಕಾಲ ಮಹಾತ್ಮಾ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ತೊರೆಯದಂತೆ ಮನವೊಲಿಸುವ ಕಾರ್ಯದಲ್ಲಿ ತೊಡಗಿದರು. ಇದು ಹಿಂದೂ-ಮುಸ್ಲಿಂ ಇಬ್ಬರಲ್ಲೂ ಅಸಮಾಧಾನದ ಹೊಗೆಯಾಡುವಂತೆ ಮಾಡಿತು. ಇದರಿಂದ ಹೊರಹೊಮ್ಮಿದ ಜ್ವಾಲೆ ಆಗಸ್ಟ್ ೧೯೪೬ರಲ್ಲಿ ಕಲ್ಕತ್ತಾದಲ್ಲಿ ಡೈರೆಕ್ಟ್ ಆಕ್ಷನ್ ಡೇ (ನೇರ ಕಾರ್ಯಾಚರಣೆಯ ದಿನ) ೫೦೦೦ ಜನರನ್ನು ಬಲಿ ತೆಗೆದುಕೊಂಡಿತು. ಉತ್ತರ ಭಾರತ ಮತ್ತು ಬಂಗಾಳದಾದ್ಯಂತ ಮತೀಯ ಗಲಭೆಗಳು ಉಂಟಾದ ಹಿನ್ನೆಲೆಯಲ್ಲಿ ಸಂಪೂರ್ಣ ಅಂತಃಕಲಹವನ್ನು ತಡೆಯುವ ಸಲುವಾಗಿ ದೇಶದ ವಿಭಜನೆಯ ಕೂಗು ತಾರಕಕ್ಕೇರಿತು.
ಎರಡು ರಾಷ್ಟ್ರಗಳ ವಿಭಜನೆಯು ಮೌಂಟ್‌ಬ್ಯಾಟನ್ ಯೋಜನೆಯಡಿ ನಡೆಯಿತು. ಭಾರತ ಮತ್ತು ಪಾಕಿಸ್ತಾನದ ನಡುವಣ ಗಡಿಯನ್ನು ಬ್ರಿಟಿಷ್ ಸರಕಾರ ನಿಯೋಜಿಸಿದ ಸಿರಿಲ್ ರಾಡ್‌ಕ್ಲಿಫ್ ಕಲ್ಪಿಸಿದನು. ಭೌಗೋಳಿಕವಾಗಿ ಭಾರತದಿಂದ ಪ್ರತ್ಯೇಕಿಸಲ್ಪಟ್ಟ ಎರಡು ರಾಜ್ಯಗಳಾಗಿ ಪಾಕಿಸ್ತಾನವು ಉದಯಗೊಂಡಿತು. ಜುಲೈ ೧೮, ೧೯೪೭ರಂದು ಬ್ರಿಟಿಷ್ ಸಂಸತ್ತಿನಲ್ಲಿ ಭಾರತದ ಸ್ವಾತಂತ್ರ್ಯ ಕಾಯ್ದೆಯನ್ನು ತರಲಾಯಿತು. ೧೯೩೫ರ ಭಾರತ ಸರಕಾರ ಕಾಯ್ದೆ ಇವೆರಡು ದೇಶಗಳ ಸಾಂವಿಧಾನಿಕ ಚೌಕಟ್ಟಾಯಿತು. ಬ್ರಿಟಿಷರ ಅಧೀನವಾಗದೇ ಉಳಿದಿದ್ದ ೫೬೫ ಸ್ಚತಂತ್ರ ರಾಜ್ಯಗಳಿಗೆ ಎರಡು ರಾಷ್ಟ್ರಗಳಲ್ಲಿ ಯಾವ ರಾಷ್ಟ್ರಕ್ಕಾದರೂ ಸೇರಿಕೊಳ್ಳುವ ಆಯ್ಕೆ ನೀಡಲಾಯಿತು. ಜುನಾಗಢ, ಹೈದರಾಬಾದ್ ರಾಜ್ಯ, ಮತ್ತು ವಿಶೇಷತಃ ಕಾಶ್ಮೀರ ರಾಜ್ಯಗಳು ವಿವಾದಿತವಾದವು.
ವಿಭಜನೆಯ ನಂತರದ ದಿನಗಳಲ್ಲಿ ಬೃಹತ್ ಪ್ರಮಾಣಗಳಲ್ಲಿ ಜನತೆಯ ವಲಸೆ ಪ್ರಾರಂಭವಾಯಿತು. ಸುಮಾರು ೧.೪೫ ಕೋಟಿ ಜನ ಗಡಿಯನ್ನು ದಾಟಿ ತಮ್ಮ ಬಹುಸಂಖ್ಯಾತ ಧರ್ಮದ ಪ್ರದೇಶಕ್ಕೆ ತೆರಳಿದರು. ೧೯೫೧ರ ಜನಗಣತಿಯ ಪ್ರಕಾರ ಭಾರತದಿಂದ ೭೨ ಲಕ್ಷ ಮುಸ್ಲಿಮರು ಪಾಕಿಸ್ತಾನಕ್ಕೂ ಮತ್ತು ೭೨ ಲಕ್ಷ ಹಿಂದೂಗಳು ಮತ್ತು ಸಿಕ್ಖರು ಪಾಕಿಸ್ತಾನದಿಂದ ಭಾರತಕ್ಕೂ ವಲಸೆ ಬಂದರು. ಎರಡು ಕಡೆಗೂ ಅಗಾಧ ಪ್ರಮಾಣದಲ್ಲಿ ಮಾರಣ ಹೋಮ ನಡೆಯುತ್ತಿದ್ದರೂ ಹೊಸದಾಗಿ ರಚಿಸಲ್ಪಟ್ಟ ಸರಕಾರಗಳು ಇವನ್ನು ತಡೆಯಲು ವಿಫಲವಾದವು. ಇದರಲ್ಲಿ ಮೃತರಾದವರ ಸಂಖ್ಯೆಯ ಅಂದಾಜು ಎರಡರಿಂದ ಹತ್ತು ಲಕ್ಷ.
#ಜೈ_ಹಿಂದ್ 🇮🇳


Comments